ಹವ್ಯಕ ಮಾಸ ಪತ್ರಿಕೆಯು ಹವ್ಯಕ ಸಮಾಜದ ಆಗು-ಹೋಗುಗಳ ಬಗ್ಗೆ ಸೂಕ್ಷ್ಮ ದೃಷ್ಟಿ ಬೀರಿ ಸಮುದಾಯಕ್ಕೆ ಸುದ್ದಿಯನ್ನು ತಲುಪಿಸುವ ಒಂದು ಪ್ರಚಾರ ಮಾಧ್ಯಮವಾಗಿ ಉಪಯುಕ್ತ ಕೆಲಸ ಮಾಡುತ್ತಿದೆ.
ಪತ್ರಿಕೆಗಳಲ್ಲಿ ಮುಖ್ಯವಾಗಿ ಎರಡು ವಿಧ. ಒಂದು ವ್ಯವಸಾಯಿ ಪತ್ರಿಕೆ (ವಾಣಿಜ್ಯ) ಮತ್ತೊಂದು ಸಂಘ-ಸಂಸ್ಥೆಗಳಿಂದ ಹೊರಡುವ ಅದರ ಮುಖವಾಣಿ ಪತ್ರಿಕೆ. ಹವ್ಯಕ ಪತ್ರಿಕೆ ಎರಡನೇ ವರ್ಗಕ್ಕೆ ಸೇರಿದ್ದು. ಇದು ಶ್ರೀ ಅಖಿಲ ಹವ್ಯಕ ಮಹಾಸಭೆಯ ಮುಖವಾಣಿಯಾಗಿ, ಮಹಾಸಭೆ ಹಾಗೂ ಸದಸ್ಯರ ನಡುವಿನ ಕೊಂಡಿಯಾಗಿದೆ. ಆರ್ಥಿಕ ಪುಟ, ವಿಷಯ, ಲೇಖನಗಳು ಹಾಗು ಅಂಚೆ ಇತ್ಯಾದಿ ನಿಗದಿಪಡಿಸುವ ಮಿತಿಗಳ ಮಧ್ಯೆ ಇಂತಹ ಪತ್ರಿಕೆಗಳು ಕೆಲಸ ಮಾಡಬೇಕಾಗುತ್ತದೆ. ಸಮಾಜಕ್ಕೆ ಸಂದೇಶಗಳನ್ನು ಸಂವಹನಗೊಳಿಸುವ ಪ್ರಚಾರ ಮಾಧ್ಯಮವಾಗಿ ಸಫಲವಾಗುವದು ಅಷ್ಟೇನು ಸುಲಭದ ಕೆಲಸವಲ್ಲ ಈ ಸ್ವರೂಪದ ಇತಿ-ಮಿತಿಗಳನ್ನು ಗಮನಿಸಿದಾಗ, ಬದಲಾಗುತ್ತಿರುವ ಜನರ ಅಭಿರುಚಿಯನ್ನು ಪರಿಗಣಿಸಿದಾಗ ಈ ರೀತಿಯ ಪತ್ರಿಕೆಗಳನ್ನು ಲಾಭದಾಯಕವಾಗಿ ನಡೆಸುವದು ಕಷ್ಟ. ಆದರೆ ಒಂದು ಸಂಸ್ಥೆಯ ದೃಷ್ಟಿಯಲ್ಲಿ ಪತ್ರಿಕೆ ಮಾಡುವ ಲಾಭಗಳೇ ಬೇರೆ.
1966 ಜೂನ್ 1ನೇ ದಿನಾಂಕದಂದು ದಿ| ಎ. ಭೀಮ ಭಟ್ಟರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕವಾಗಿ ಮೊದಲ ಪತ್ರಿಕೆ ಲೋಕಾರ್ಪಣೆಗೊಂಡಿತು. ಆ ಸಂದರ್ಭದಲ್ಲಿ ಅದು ೧೫ ಪುಟಗಳ ಗಾತ್ರವನ್ನು ಹೊಂದಿತ್ತು. ದೂರದೂರದ ಊರು, ರಾಜ್ಯ ಮತ್ತು ಹೊರದೇಶಗಳಲ್ಲಿ ಹಂಚಿಹೋದ ಹವ್ಯಕರಿಗೆ ತಮ್ಮ ವಿಚಾರ, ಅನುಭವ, ಅಭಿಪ್ರಾಯವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು, ಕೇಂದ್ರ ಸಂಸ್ಥೆಯೊಂದಿಗೆ ಸದಾ ಸಂಪರ್ಕ ಇಟ್ಟುಕೊಳ್ಳಲು ಅನುವಾಗುವ ಒಂದು ಸಮರ್ಥ ಮಾಧ್ಯಮವಾಗಿ ಹವ್ಯಕ ಪತ್ರಿಕೆ ತನ್ನ ಪ್ರಗತಿಯ ಒಂದೊಂದೆ ಹೆಜ್ಜೆಗಳನ್ನು ಇಡ ತೊಡಗಿತು. ಹವ್ಯಕದ ಕಾರ್ಯ ಚಟುವಟಿಕೆಗಳು ಜಾಸ್ತಿಯಾಗುತ್ತಿದ್ದಂತೆ ತ್ರೈಮಾಸಿಕವಾಗಿ ಪ್ರಕಟವಾಗುತ್ತಿದ್ದ ಪತ್ರಿಕೆ ಮಾಸಿಕವಾಗಿ, ಹವ್ಯಕದ ಯೋಚನೆ-ಯೋಜನೆಗಳು ಜನರಿಗೆ ಮತ್ತಷ್ಟು ಹತ್ತಿರವಾಗಿ ಕಾರ್ಯರೂಪಕ್ಕೆ ಬಂದವು.
1981 ಜನವರಿ 1ರಂದು ಮಾಸಿಕ ಪತ್ರಿಕೆಯಾಗಿ 8 ಪುಟಗಳ ಮೊದಲ ಸಂಚಿಕೆ ಪ್ರಕಟವಾಯಿತು. ಕಲೆ, ಸಂಸ್ಕೃತಿ, ಸಾಹಿತ್ಯ ಇತ್ಯಾದಿ ವಿವರಗಳ ಜೊತೆ ವಧೂ-ವರಾನ್ವೇಷಣೆ, ಉದ್ಯೋಗ ತರಬೇತಿ, ಶಿಕ್ಷಣಾವಕಾಶಗಳು, ಪುಸ್ತಕ ಪರಿಚಯ, ಸಾಹಿತ್ಯ ಸೌರಭ, ಕೃಷಿ, ಕೈಗಾರಿಕಾ ಮಾಹಿತಿಗಳು ಇತ್ಯಾದಿಗಳ ಬಗ್ಗೆ ಲೇಖನಗಳನ್ನು ಪ್ರಕಟಿಸುವ ಮೂಲಕ ಒಂದು ಮಾಹಿತಿ ಪತ್ರಿಕೆಯಾಗುವಲ್ಲಿ ಪ್ರಯತ್ನ ಸಾಗಿತು. ಬೆಂಗಳೂರು ಚಾಮರಾಜಪೇಟೆಯಲ್ಲಿರುವ ಸಿಂಹ ಪ್ರಿಂಟರ್ಸ್ನಲ್ಲಿ ಮುದ್ರಿಸಲ್ಪಟ್ಟು ಶ್ರೀ ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಎನ್. ಕೆ. ಗಣಪಯ್ಯನವರಿಂದ ಪ್ರಕಾಶಿಸಲ್ಪಟ್ಟಿತು. ಆ ಸಂಚಿಕೆಗೆ ರಾಮಚಂದ್ರ ಶರ್ಮಾ ತ್ಯಾಗಲಿ ಸಂಪಾದಕರಾಗಿದ್ದರು. 2001-2002ರ ಹೊತ್ತಿಗೆ ಕೆಲವು ತಿಂಗಳು 24 ಪುಟಗಳ ಗಾತ್ರ ಹೊಂದಿ ನಂತರ 15 ಪುಟಗಳ ಮಿತಿಗೂ ಬಂತು. ಡಾ. ಗಿರಿಧರ ಕಜೆಯವರ ಸಂಪಾದಕತ್ವದಲ್ಲಿ ವೈವಿಧ್ಯಮಯ ವಿಷಯಗಳೊಂದಿಗೆ ಮುಖಪುಟದಲ್ಲಿ ವಿಷಯಾನುಕ್ರಮಣಿಕೆಯನ್ನು ಹಾಕುವುದರ ಮೂಲಕ ಒಂದು ಹೊಸತನವನ್ನು ಪಡೆದುಕೊಂಡು 28 ಪುಟಗಳ ಗಾತ್ರ ಹೊಂದಿತ್ತು. ಇದುವರೆಗೂ ಪ್ರಮುಖ ವಿಷಯಗಳನ್ನೊಳಗೊಂಡ ಮುಖಪುಟವಿರುತ್ತಿದ್ದು, 2002ಮೇ ತಿಂಗಳಿಂದ ಪ್ರತ್ಯೇಕ ಚಿತ್ರಗಳನ್ನೊಳಗೊಂಡು ನ್ಯೂಸ್ ಪ್ರಿಂಟಿನಲ್ಲಿ ಆಕರ್ಷಣೀಯ ಮುಖಪುಟಗಳು ಪತ್ರಿಕೆಯ ಅಂದವನ್ನು ಹೆಚ್ಚಿಸಿದವು.
ಇನ್ನು ಜಾಹಿರಾತು ಒಂದರ್ಥದಲ್ಲಿ ಪತ್ರಿಕೆಯ ಜೀವಾಳ, ಬಣ್ಣದ ಹಾಗೂ ಕಪ್ಪುಬಿಳುಪಿನ ಜಾಹಿರಾತುಗಳು ಪ್ರಕಟವಾಗುತ್ತಿದ್ದರೂ ಪತ್ರಿಕೆಯ ಖರ್ಚು ವೆಚ್ಚವನ್ನು ಸರಿದೂಗಿಸುವುದು ಸ್ವಲ್ಪ ಕಷ್ಟವಾಗಿತ್ತು. ಒಟ್ಟೂ ಸದಸ್ಯತ್ವದ ಠೇವಣಿ ಹಣದ ಮೇಲಿನ ಬಡ್ಡಿಯಲ್ಲಿ ಅರ್ಧಭಾಗವನ್ನು ತೆಗೆದುಕೊಂಡಾಗ (ಬೈಲಾದಲ್ಲಿರುವಂತೆ) ಪತ್ರಿಕೆಯ ಪ್ರಕಟಣೆಯಲ್ಲಿ ಲಾಭಾಂಶವನ್ನು ಕಾಣಬಹುದು. ಹಾಗಂತ ಒಂದು ಸಂಸ್ಥೆಯ ಮುಖವಾಣಿ ಪತ್ರಿಕೆಯ ವಿಷಯದಲ್ಲಿ ನಷ್ಟ ಎನ್ನುವ ಪದವನ್ನು ಬಳಸಲೇ ಬಾರದು. ಕಾರಣ ಇವತ್ತೇನಾದರೂ ಹವ್ಯಕ ಮಹಾಸಭೆ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದರೆ ಅದರ ಸಿಂಹಪಾಲು ಹೋಗಬೇಕಾದದ್ದು ಪತ್ರಿಕೆಗೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ, ಇದು ಹೆಮ್ಮೆಯ ವಿಷಯವೂ ಹೌದು. ಪತ್ರಿಕೆ, ಸಂಸ್ಥೆ ಹಾಗೂ ಸಮಾಜದ ಮಧ್ಯೆ ಒಂದು ಅರ್ಥಪೂರ್ಣ ಸಂಪರ್ಕ ಸೇತುವೆಯಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ತನ್ನ ಪೊರೆ ಕಳಚಿಕೊಂಡ ಪತ್ರಿಕೆ ತನ್ನನ್ನು ಪರಿವರ್ತನ ಶೀಲ ಕ್ರಿಯೆಗೆ ಆಗು ಮಾಡಿಕೊಂಡು ಹೊಸ ಆಕಾರವನ್ನು ಹೊಸ ಆಯಾಮವನ್ನು, ಶ್ರೇಷ್ಠ ಮೌಲ್ಯವನ್ನು ಪಡೆದುಕೊಂಡಿರುವುದು ಶ್ಲಾಘನೀಯ. ಹತ್ತು ಪುಟಗಳಿಂದ 68 ಪುಟಗಳವರೆಗೂ ತನ್ನ ಗಾತ್ರವನ್ನು ಹೆಚ್ಚಿಸಿಕೊಂಡು ವೈವಿಧ್ಯಮಯ ವಿಚಾರಗಳೊಂದಿಗೆ ಒಂದು ಸಮರ್ಥ ಮಾಹಿತಿ ಪತ್ರಿಕೆಯಾಗಿ ಹೊರಬರುತ್ತಿರುವುದು ಸಂತಸದ ಸಂಗತಿ. ಎಲ್ಲ ಬಗೆಯ ಓದುಗರನ್ನೂ ರಂಜಿಸಬಲ್ಲ, ಒಂದಷ್ಟು ಆಲೋಚನೆಗಳಿಗೆ, ವಿವೇಕಗಳಿಗೆ, ತನ್ನ ಪುಟಗಳನ್ನು ತೆರೆದುಕೊಂಡಿರುವುದು ಓದುಗರ ಪ್ರಶಂಸೆಗೆ ಪಾತ್ರವಾಗಿದೆ.