ಹವ್ಯಕ, ಬ್ರಾಹ್ಮಣ ಜಾತಿಯ ಒಳ ಪಂಗಡ. ಹವ್ಯಕರು ಪ್ರಮುಖವಾಗಿ ನೆಲೆಸಿರುವುದು ಕರ್ನಾಟಕದ ಮಲೆನಾಡು ಹಾಗೂ ಸಮುದ್ರ ತೀರದ ಜಿಲ್ಲೆಗಳಲ್ಲಿ. ಬಹುತೇಕ ಹವ್ಯಕರ ಪೂರ್ವಜರು ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯವರು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಬಳಿಯಿರುವ ಶ್ರೀ ರಾಮಚಂದ್ರಾಪುರ ಮಠ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಸೋಂದೆಯಲ್ಲಿರುವ ಸ್ವರ್ಣವಲ್ಲೀ ಮಠ ಇವರ ಪ್ರಮುಖ ಮಠಗಳು. ಮೂರನೇಯದಾದ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೇರೂರಿನಲ್ಲಿರುವ ನೆಲೆಮಾವು ಪೀಠ. ಹವ್ಯಕರು ಶಂಕರಾಚಾರ್ಯರ ಅದ್ವೈತ ಸಿದ್ಧಾಂತದ ಅನುಯಾಯಿಗಳು. ಮೊದಲಿನಿಂದ ಮುಖ್ಯವಾಗಿ ವೈದಿಕರು ಮತ್ತು ಅಡಿಕೆ ಕೃಷಿಕರಾಗಿದ್ದು ಇತ್ತೀಚಿನ ದಶಕಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದಲ್ಲಿ ಹವ್ಯಕರ ಪಾತ್ರ ಗಣನೀಯವಾಗಿದೆ. ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿಗಳಲ್ಲಿ ಭಾಗವಹಿಸಿದ್ದರು.
ಹವ್ಯಕ ಎಂದರೇನು?
ಹವ್ಯಕ ಎಂಬ ಪದವು ಹವೀಗ (ಹವೀಕ) ಅಥವಾ ಹವ್ಯಗ ಎಂಬ ಪದದಿಂದ ಬಂದಿರಬಹುದೆಂದು ಅಂದಾಜಿಸಲಾಗಿದೆ. ಇದರ ಅರ್ಥ ಹವ್ಯ-ಕವ್ಯ. ಅಂದರೆ ದೇವತೆ ಮತ್ತು ಪಿತೃಗಳಿಗಾಗಿ ಹವನ ಹೋಮಗಳನ್ನು ಮಾಡುವವನು ಎಂದು. ಹಿಂದಿನ ಕಾಲದಿಂದಲೂ ರಾಜರಿಗೆ ಹವನ-ಹೋಮಗಳನ್ನು ಮಾಡಿಕೊಡುವುದು ಹವ್ಯಕರ ಕೆಲಸವಾಗಿತ್ತು. ಮೇಲೆ ಕೊಂಕಣ ಮತ್ತು ಕೆಳಗೆ ತುಳುವ ಗಡಿಯವರೆಗೆ ಈಗಿನ ಉತ್ತರ ಕನ್ನಡ ಜಿಲ್ಲೆ ಇರುವ ಪ್ರದೇಶಕ್ಕೆ ಹಿಂದೆ ‘ಹೈವ’ ಎಂಬ ಹೆಸರಿತ್ತು. ಇದರಿಂದ ‘ಹೈಗ’ ಎಂಬ ಪದ ಬಳಕೆಗೆ ಬಂದಿರಬಹುದು. ಈಗಲೂ ಹವ್ಯಕರನ್ನು ಹೈಗರು ಎಂದು ಕರೆಯುವ ರೂಢಿ ಇದೆ. ಹೈಗುಂದ ಎಂಬ ಊರಿನಿಂದ ಹವ್ಯಕರಿಗೆ ಈ ಹೆಸರು ಬಂದಿರಬಹುದು ಎಂಬ ವಿಚಾರವೂ ಇದೆ. ಹವ್ಯಕ ಅಥವಾ ಹವ್ಯಕ ಕನ್ನಡ ಎಂದರೆ ಹವ್ಯಕರು ಮಾತನಾಡುವ ಭಾಷೆ. ಇದು ಕನ್ನಡದ ಒಂದು ಉಪಭಾಷೆ.
ಹವ್ಯಕರ ಮೂಲ
ಹವ್ಯಕರ ಮೂಲದ ನಿಖರತೆಯ ಬಗ್ಗೆ ಇನ್ನೂ ಸಂದೇಹಗಳಿದ್ದರೂ ಸಹ ಸಂಶೋಧನೆಗಳ ಪ್ರಕಾರ ಹವ್ಯಕರು ಮೂಲತಃ ಬನವಾಸಿ ಪ್ರದೇಶದವರೇ ಆಗಿದ್ದು ಆ ಕಾಲದಲ್ಲಿ ಅವೈದಿಕ ಮತಗಳ ಹಾವಳಿಯಿಂದಾಗಿ ಅಹಿಚ್ಛತ್ರ ಎಂಬ ಸ್ಠಳಕ್ಕೆ (ಈಗಿನ ಉತ್ತರ ಪ್ರದೇಶ ರಾಜ್ಯದಲ್ಲಿದೆ) ವಲಸೆ ಹೋಗಿದ್ದರು. ಕ್ರಿ.ಶ. ಮೂರನೇ ಶತಮಾನದಲ್ಲಿ ಕನ್ನಡದ ಮೊದಲ ರಾಜಮನೆತನ ಸ್ಥಾಪಿಸಿದ ಕದಂಬರ ಮಯೂರವರ್ಮನಿಗೆ ಅಂದಿನ ದಿನಗಳಲ್ಲಿದ್ದ ಬ್ರಾಹ್ಮಣರ ಕೊರತೆಯಿಂದಾಗಿ ತನ್ನ ಧಾರ್ಮಿಕ ಆಚರಣೆಗಳನ್ನು ಸಾಗಿಸಲು ಕಷ್ಟವಾಗಿತ್ತಂತೆ, ಆತ ಹೋಮ-ಹವನಗಳನ್ನು ಮಾಡಿಸಲು ಹವ್ಯಕ ಕುಟುಂಬಗಳನ್ನು ಅಹಿಚ್ಛತ್ರದಿಂದ ಆಹ್ವಾನಿಸಿ ಕರೆತಂದು ರಾಜಾಶ್ರಯ ಕಲ್ಪಿಸಿ ಕೆಲವು ಹಳ್ಳಿಗಳನ್ನು ಅವರಿಗೆ ಉಂಬಳಿ ನೀಡಿ, ನೆಲೆ ನಿಲ್ಲುವಂತೆ ಅನುಕೂಲ ಕಲ್ಪಿಸಿಕೊಟ್ಟ ಎಂದು ಸಂಶೋಧನೆಗಳು ಹೇಳುತ್ತವೆ. ಸಾಗರ ತಾಲ್ಲೂಕಿನ ವರದಹಳ್ಳಿಯಲ್ಲಿರುವ ಶಿಲಾಶಾಸನದಲ್ಲಿ ಮಯೂರವರ್ಮನು ಹವ್ಯಕರನ್ನು ಕರೆತಂದ ಬಗ್ಗೆ ಉಲ್ಲೇಖವಿದೆ. ಕದಂಬರು ಕರೆತಂದ ಕುಟುಂಬಗಳು ಬನವಾಸಿಯಲ್ಲಿ ನೆಲೆಯೂರಿ ಅನಂತರ ಎಲ್ಲೆಡೆ ಹರಡಿದರು.
ಭೌಗೋಳಿಕ ವ್ಯಾಪ್ತಿ
ಹವ್ಯಕರು ಭಾರತದಲ್ಲಿ ಮುಖ್ಯವಾಗಿ ನೆಲೆಗೊಂಡಿರುವುದು ಕರ್ನಾಟಕ ರಾಜ್ಯದಲ್ಲಿ. ಕರ್ನಾಟಕದ ಉತ್ತರಕನ್ನಡ, ದಕ್ಷಿಣಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮತ್ತು ಕೇರಳ ರಾಜ್ಯದ ಕಾಸರಗೋಡು ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಶತಮಾನಗಳಿಂದ ವಾಸವಾಗಿದ್ದಾರೆ. ಧಾರವಾಡ, ಹುಬ್ಬಳ್ಳಿ, ಮುಂಬಯಿ, ಬೆಂಗಳೂರು ಕಡೆಗೆ ಬೇರೆ ಬೇರೆ ಕಾರಣಗಳಿಂದ ವಲಸೆ ಹೋಗಿದ್ದಾರೆ. ಈಗಿನ ತಲೆಮಾರಿನಲ್ಲಿ ಬೆಂಗಳೂರಿಗೆ ವಲಸೆ ಬಂದವರ ಸಂಖ್ಯೆ ಹೆಚ್ಚಾಗಿದೆ. ಇದಲ್ಲದೇ ಭಾರತದ ಬೇರೆ ಬೇರೆ ನಗರಗಳಲ್ಲಿ ಉದ್ಯೋಗದ ಕಾರಣಕ್ಕಾಗಿ ಹವ್ಯಕರು ವಲಸೆ ಹೋಗಿ ನೆಲೆಗೊಂಡಿದ್ದಾರೆ. ಯು.ಎಸ್.ಎ., ಯು.ಕೆ, ಆಸ್ಟ್ರೇಲಿಯಾ, ಅರಬ್ ದೇಶಗಳು ಮೊದಲಾದ ಹೊರದೇಶಗಳಲ್ಲೂ ಸಹ ಹವ್ಯಕರು ಹೋಗಿ ನೆಲೆಸಿದ್ದಾರೆ. ಮುಂಬಯಿ ಮತ್ತು ಬೆಂಗಳೂರು ನಗರಗಳಲ್ಲಿ ಹವ್ಯಕರ ಸಂಖ್ಯೆ ಗಣನೀಯವಾಗಿದೆ. ವಲಸೆ ಬಂದ ಹವ್ಯಕರ ಬೇರುಗಳು ಮೇಲೆ ಹೇಳಿದ ಜಿಲ್ಲೆಗಳಲ್ಲಿದೆ.
ಅಡ್ಡಹೆಸರು/ಕುಟುಂಬದ ಹೆಸರು
ಹವ್ಯಕರಲ್ಲಿ ಅತಿ ಹೆಚ್ಚು ಕಂಡುಬರುವುದು ಭಟ್ಟ ಮತ್ತು ಹೆಗಡೆ ಎಂಬ ಅಡ್ಡ ಹೆಸರುಗಳು. ಇವಲ್ಲದೇ ದೀಕ್ಷಿತ, ಉಪಾಧ್ಯಾಯ, ಉಪಾಧ್ಯ, ಹೆಬ್ಬಾರ, ಶಾಸ್ತ್ರಿ, ಶರ್ಮಾ, ವೈದ್ಯ, ಭಾಗವತ, ರಾವ್, ಪಂಡಿತ, ಸಭಾಹಿತ, ಜೋಯ್ಸ, ಗಾಂವ್ಕರ್, ಪುರೋಹಿತ, ಪುರಾಣಿಕ, ಜೋಶಿ ಮುಂತಾದ ಅಡ್ಡ ಹೆಸರುಗಳು ಕೂಡ ಇವೆ. ಎಲ್ಲವೂ ಅವರು ಮಾಡುತ್ತಿದ್ದ ಉದ್ಯೋಗ ಮತ್ತು ಸಾಮಾಜಿಕ ಸ್ಥಾನದಿಂದ ಬಂದಿರುವಂತವು. ಕರ್ಕಿ, ದೊಡ್ಡೇರಿ, ನಡಹಳ್ಳಿ ಮುಂತಾದ ಮೂಲ ಊರಿನ ಹೆಸರಿನಿಂದ ಬಂದಿರುವ ಇನ್ನೂ ಕೆಲವು ಅಡ್ಡಹೆಸರುಗಳು ಕೂಡ ಇವೆ.
ಭಾಷೆ
ಹವ್ಯಕರು ಮಾತನಾಡುವ ಭಾಷೆ ಹವ್ಯಕ ಕನ್ನಡ ಅಥವಾ ಹವಿಗನ್ನಡ. ಇದು ಕನ್ನಡದ ಉಪಭಾಷೆಯಾಗಿದ್ದು ೬೦ -೭೦ % ಸಾಮಾನ್ಯ ಕನ್ನಡದಂತೆಯೇ ಇದ್ದು ಹಳೆಗನ್ನಡದ ಕೆಲವು ಪದಗಳನ್ನು ಒಳಗೊಂಡಿದೆ. ವಾಕ್ಯಗಳ ಕೊನೆಯಲ್ಲಿ ಬರುವ ಕ್ರಿಯಾಪದಗಳು ಬೇರೆ ರೀತಿ ಇರುತ್ತವೆ. ಸಿರ್ಸಿ, ಯಲ್ಲಾಪುರ, ಸಾಗರ, ಸೊರಬ, ಕುಮಟಾ-ಹೊನ್ನಾವರ, ಗೋಕರ್ಣ, ದಕ್ಷಿಣ ಕನ್ನಡ, ಕಾಸರಗೋಡು ಮುಂತಾದ ಪ್ರದೇಶಗಳಲ್ಲಿನ ಹವ್ಯಕ ಭಾಷೆಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಹವ್ಯಕ ಕನ್ನಡದ ಲಿಪಿ ಕನ್ನಡ. ಹವ್ಯಕ ಭಾಷೆಯ ಹುಟ್ಟಿನ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲ.
ಹವ್ಯಕರು ಇಂದು
ಹವ್ಯಕರ ಜೀವನಾಧಾರ ಮೊದಲಿನಿಂದಲೂ ಕೃಷಿ ಚಟುವಟಿಕೆಗಳು. ಅಡಿಕೆ, ತೆಂಗು, ಭತ್ತ, ಏಲಕ್ಕಿ, ಕಾಳುಮೆಣಸು, ವೀಳ್ಯದೆಲೆ ಮುಂತಾದವುಗಳನ್ನು ಬೆಳೆಯುತ್ತಿದ್ದರು. ಇದರ ಜೊತೆ ಅನೇಕ ಕುಟುಂಬಗಳು ಪೌರೋಹಿತ್ಯವನ್ನು ಕೂಡ ವೃತ್ತಿಯಾಗಿರಿಸಿಕೊಂಡಿದ್ದವು. ಇವತ್ತಿಗೂ ಕೃಷಿಯೇ ಹವ್ಯಕರ ಮುಖ್ಯ ಉದ್ಯೋಗವಾಗಿದ್ದರೂ ಕೂಡ ಇತ್ತೀಚಿನ ಕೆಲದಶಕಗಳಿಂದ ಹವ್ಯಕರು ಬೇರೆ ಬೇರೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಕೊಂಡಿದ್ದಾರೆ.