ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಮಲ್ಲೇಶ್ವರ ಬೆಂಗಳೂರು:
ಹವ್ಯಕ ಸಭಾಭವನದಲ್ಲಿ ಜರುಗುವ ವಿವಿಧ ಶುಭಸಮಾರಂಭಗಳ ಸಂದರ್ಭದಲ್ಲಿ ದೇವರ ದರ್ಶನಕ್ಕೆ ಅವಕಾಶ ಒದಗಿಸಿಕೊಡಬೇಕಾದ ಅವಶ್ಯಕತೆ ಮನಗಂಡು, ಮಹಾಸಭೆಯ ಆವರಣದಲ್ಲಿ ನಿರ್ಮಿಸಲಾಗುವ ಗಣೇಶ ದೇವಸ್ಥಾನದ ಕಟ್ಟಡಕ್ಕೆ ದಿನಾಂಕ 18-09-1983ರಂದು ಶಿಲಾನ್ಯಾಸ ನೆರವೇರಿಸಲಾಯಿತು. ದಿನಾಂಕ 13-05-1984ರಂದು ಪರಮಪೂಜ್ಯ ಶ್ರೀ ರಾಘವೇಂದ್ರಭಾರತೀ ಸ್ವಾಮಿಗಳು, ಶ್ರೀ ರಾಮಚಂದ್ರಾಪುರ ಮಠ ಇವರ ದಿವ್ಯಹಸ್ತದಿಂದ ಶ್ರೀ ಸಿದ್ಧಿವಿನಾಯಕ ದೇವರ ಮೂರ್ತಿಯ ಪ್ರತಿಷ್ಠಾಪನೆಯಾಯಿತು. ಹೊಯ್ಸಳ ಶೈಲಿಯ, ಮೋದಕ, ವರದಹಸ್ತ ಪಾಶಾಂಕುಶಧಾರಿಯಾದ ಕೃಷ್ಣ ಶಿಲೆಯ ಸುಮಾರು 25 ಇಂಚು ಎತ್ತರವಿರುವ ನಿಂತುಕೊಂಡ ಭಂಗಿಯಲ್ಲಿರುವ ಸುಂದರ ಮೂರ್ತಿ ಭಕ್ತರ ಪಾಲಿಗೆ ಶಕ್ತಿದೇವತೆಯಾಗಿದೆ.
ನೂತನ ವಿದ್ಯಾರ್ಥಿನಿಲಯ ಸಮುಚ್ಚಯದ ನಿರ್ಮಾಣ ಸಂದರ್ಭದಲ್ಲಿ ಈ ಹಿಂದೆ ಇರುವ ದೇಗುಲವನ್ನೂ ಸಹ ಕೆಡವಿ ಆಗಮ ವಾಸ್ತು ಶಾಸ್ತ್ರದ ಪ್ರಕಾರ ಸ್ಥಳ ಬದಲಾವಣೆ ಮಾಡಿ ನೂತನ ಶಿಲಾಮಯ ದೇವಾಲಯವನ್ನು ಕಟ್ಟಲಾಯಿತು. ದಿನಾಂಕ ಮೇ 08 2017ರಂದು ಶ್ರೀ ದೇವರ ಪುನಃಪ್ರತಿಷ್ಠಾಪನೆಯನ್ನು ವೇ|ಮೂ| ಶಂಕರನಾರಾಯಣ ಭಟ್ಟ, ಪಳ್ಳತ್ತಡ್ಕ ಇವರು ನೆರವೇರಿಸಿದರು. ವೇ| ಮೂ| ಹುಲಿಮನೆ ಮಂಜುನಾಥ ಭಟ್ಟ, ದೇವಸ್ಥಾನದ ಅರ್ಚಕರಾದ ವೇ|ಮೂ| ರಾಮಚಂದ್ರ ಭಟ್ಟ ಇವರ ನೇತೃತ್ವದಲ್ಲಿ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಶಿಲಾ ದೇಗುಲವು ಸುಂದರವಾಗಿ ಮೂಡಿಬಂದಿದೆ. 09-05-2017ರಂದು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಶ್ರೀಕ್ಷೇತ್ರ ಹೊರನಾಡು ಇದರ ಧರ್ಮದರ್ಶಿಗಳಾದ ಶ್ರಿ ಭೀಮೇಶ್ವರ ಜೋಷಿಯವರಿಂದ ಬ್ರಹ್ಮಕಲಶಾಭಿಷೇಕ ನೆರವೇರಿತು. ಪ್ರತಿ ದಿನ ತ್ರಿಕಾಲ ಪೂಜೆ, ಪ್ರತಿ ತಿಂಗಳು ಸಂಕಷ್ಟಹರ ಚತುರ್ಥಿಯಂದು ಷೋಡಶೋಪಚಾರಸಹಿತ ವಿಶೇಷ ಪೂಜೆ ಹಾಗೂ ಶುದ್ಧಚೌತಿಯಂದು ರಂಗಪೂಜೆ, ಕಾರ್ತೀಕ ಮಾಸದಲ್ಲಿ ಕಾರ್ತೀಕ ದೀಪೋತ್ಸವ ಹಾಗೂ ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆಗಳು ಶ್ರೀ ದೇವರಸನ್ನಿಧಾನದಲ್ಲಿ ನಡೆಯುತ್ತದೆ.
ಹವ್ಯಕ ಭವನ ಮಲ್ಲೇಶ್ವರ ಬೆಂಗಳೂರು:
ವಿಶಾಲವಾಗಿ ನಿಂತ ಕಟ್ಟಡದ ನೆಲಮಾಳಿಗೆಯಲ್ಲಿ ಸುವ್ಯವಸ್ಥಿತ ಅಡುಗೆ ಮನೆ, ಸುಮಾರು 200 ಜನರಿಗೆ ಏಕಕಾಲಕ್ಕೆ ಅವಕಾಶವಿರುವ ಊಟದ ಹಾಲ್, ನೆಲಮಹಡಿಯಲ್ಲಿ ಸುಮಾರು 500 ಜನ ಕುಳಿತುಕೊಳ್ಳಬಹುದಾದ ದೊಡ್ಡ ಸಭಾಂಗಣ, ಬಾಲ್ಕನಿ ಮತ್ತು ವಿಶಾಲವಾದ ವೇದಿಕೆ, ಅಕ್ಕಪಕ್ಕದಲ್ಲಿ ವ್ಯವಸ್ಥಿತ ಕೊಠಡಿ ಇರುವ ಇದು ಎಲ್ಲಾ ರೀತಿಯ ಸಮಾರಂಭಗಳಿಗೂ ಅನುಕೂಲಕರವಾಗಿದೆ. ಎರಡನೇ ಮಹಡಿಯಲ್ಲಿ ಕಾರ್ಯಾಲಯ ಹಾಗೂ ಎರಡು ಚಿಕ್ಕ ಸಭಾಂಗಣಗಳು ಹಾಗೂ ಮೂರನೆಯ ಮಹಡಿಯಲ್ಲಿ ವಿದ್ಯಾರ್ಥಿನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆಯಿಂದ ಕೂಡಿರುವ ಸಭಾಂಗಣವು “ಹವ್ಯಕ ಭವನ” ಎನ್ನುವ ಹೆಸರಿನಲ್ಲಿ ಶುಭ ಕಾರ್ಯ ಹಾಗೂ ಸಭೆ ಸಮಾರಂಭಗಳನ್ನು ಆಯೋಜಿಸಲು ಸಾರ್ವಜನಿಕರಿಗೆ ಮುಕ್ತವಾಗಿದೆ.
ಎನ್. ಕೆ. ಗಣಪಯ್ಯ ಸ್ಮಾರಕ ವಿದ್ಯಾರ್ಥಿ ನಿಲಯ ಮಲ್ಲೇಶ್ವರ ಬೆಂಗಳೂರು:
ಹಳ್ಳಿ ಮೂಲೆಗಳಿಂದ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯದ ಸಮಸ್ಯೆ ಉಂಟಾಗಬಾರದು ಎನ್ನುವ ಘನ ಉದ್ದೇಶ ಹವ್ಯಕದ್ದಾಗಿತ್ತು. ಈ ಹಿನ್ನಲೆಯಲ್ಲಿ 1974ರಲ್ಲಿ ಡಾ. ಎನ್. ಕೆ. ಗಣಪಯ್ಯನವರ ಮುಂದಾಳತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಒಂದನ್ನು ಪ್ರಾರಂಭಿಸಲಾಯಿತು. ಅದೇ ವಿದ್ಯಾರ್ಥಿನಿಲಯಕ್ಕೆ 1988ರಲ್ಲಿ ದಿ| ಎನ್. ಕೆ. ಗಣಪಯ್ಯ ಸ್ಮಾರಕ ವಿದ್ಯಾರ್ಥಿನಿಲಯವೆಂದು ಮರುನಾಮಕರಣ ಮಾಡಲಾಯಿತು. ವಿದ್ಯಾರ್ಥಿ ನಿಲಯದಲ್ಲಿ ಸುಮಾರು 35 ವಿದ್ಯಾರ್ಥಿಗಳ ವಸತಿಗೆ ಅನುಕೂಲ ಕಲ್ಪಿಸಲಾಗಿತ್ತು.
2016ರಲ್ಲಿ ಲೋಕಾರ್ಪಣೆಗೊಂಡ ನೂತನ ವಿದ್ಯಾರ್ಥಿನಿಲಯ ಸಮುಚ್ಚಯದಲ್ಲೂ ಗಣಪಯ್ಯನವರ ಹೆಸರಿನಲ್ಲಿಯೇ ವಿದ್ಯಾರ್ಥಿ ನಿಲಯ ಪ್ರಾರಂಭಿಸಲಾಯಿತು. ಆಧುನಿಕ ವ್ಯವಸ್ಥೆಯ ಸ್ವಚ್ಚ ಪರಿಸರದಲ್ಲಿ ಸುಮಾರು 60 ವಿದ್ಯಾರ್ಥಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿನಿಲಯಕ್ಕೆ ಹೊಂದಿಕೊಂಡಂತೆ ಪ್ರತ್ಯೇಕ ಅಡುಗೆ ಮನೆ, ಭೋಜನ ಶಾಲೆ, ಓದುವ ಕೋಣೆ ಮುಂತಾದ ವ್ಯವಸ್ಥೆಯನ್ನು ಅಳವಡಿಸಿ ವಿದ್ಯಾರ್ಥಿಗಳ ಓದಿಗೆ ನೆಮ್ಮದಿಯ ವಾತಾವರಣವನ್ನು ಕಲ್ಪಿಸಲಾಗಿದೆ.
ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಮಹಿಳಾ ವಸತಿ ಗೃಹ ಗಿರಿನಗರ ಬೆಂಗಳೂರು:
ಎಪ್ರಿಲ್ 13, 1994ರಂದು ಗಿರಿನಗರದ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ಪ್ರಾರಂಭವಾದ ಈ ವಸತಿನಿಲಯ ಸುಮಾರು 80 ಜನ ಹೆಣ್ಣುಮಕ್ಕಳಿಗೆ ಅವಕಾಶ ಮಾಡಿಕೊಟ್ಟಿತ್ತು. ಗಿರನಗರ ನಿರ್ಮಾತೃರಾದ ದಿ| ಬಿ. ಕೃಷ್ಣ ಭಟ್ ಇವರು ಉದಾರವಾಗಿ ದಾನವಾಗಿ ನೀಡಿದ 3000 ಚದರ ಅಡಿ ನಿವೇಶನದಲ್ಲಿ ಆಗಸ್ಟ್ 2000ದಲ್ಲಿ ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಿತು. ದಿ| ಗಜಾನನ ಜೋಶಿ, ಗೋಕರ್ಣ ಇವರು ಅಂದಿನ ದಿನದಲ್ಲಿ 10 ಲಕ್ಷ ರೂಗಳ ದೊಡ್ಡಮೊತ್ತದ ದೇಣಿಗೆ ನೀಡಿ ಮಹಾಸಭೆಯ ಕೃತಜ್ಞತೆಗೆ ಪಾತ್ರರಾಗಿದ್ದಾರೆ. ಇವರ ಆಶಯದಂತೆ ವಸತಿನಿಲಯವನ್ನು ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಮಹಿಳಾ ವಸತಿ ಗೃಹ ಎಂದು ನಾಮಕರಣ ಮಾಡಲಾಯಿತು. ಶ್ರೀ ಎಸ್.ಆರ್. ಭಾಗ್ವತ್ ಮತ್ತು ಇತರೆ ಬಾಂಧವರು ನೀಡಿದ ದೇಣಿಗೆಯಲ್ಲಿ ಈ ಮಹಿಳಾ ವಸತನಿಲಯ ವ್ಯವಸ್ಥಿತವಾಗಿ ರೂಪುಗೊಳ್ಳಲು ಕಾರಣವಾಯಿತು. ವಜ್ರಮಹೋತ್ಸವ ವರ್ಷವಾದ 2002-03ರ ಶುಭಸಂದರ್ಭದಲ್ಲಿ ದಿನಾಂಕ 23-03-2003ರಂದು ಮಹಿಳಾ ವಸತಿನಿಲಯದ ಮೂರನೆಯ ಮಹಡಿಯು ಉದ್ಘಾಟನೆಯಾಯಿತು. ಕೆನರಾ ಬ್ಯಾಂಕಿನ ಉದಾರ ಸಹಾಯ ಹಾಗೂ ಆರ್.ವಿ. ಶಾಸ್ತ್ರಿಯವರ ಸಹಕಾರವನ್ನು ಈ ಸಂದರ್ಭದಲ್ಲಿ ಮಹಾಸಭೆ ಸ್ಮರಿಸುತ್ತದೆ. ಈ ಮಹಡಿಯನ್ನು ಕೆನರಾ ಬ್ಯಾಂಕ್ ಮಹಡಿಯೆಂದೆ ಹೆಸರಿಸಲಾಗಿದೆ. ಪ್ರಸ್ತುತ 108 ವಿದ್ಯಾರ್ಥಿನಿಯರಿಗೆ ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ.
ಗೋರೆಭಟ್ಟ ವಿದ್ಯಾರ್ಥಿನಿಲಯ ಚಿಕ್ಕಬೆಟ್ಟಹಳ್ಳಿ ಬೆಂಗಳೂರು:
ಹವ್ಯಕ ಮಹಾಸಭೆಯ ಸಹಕಾರದೊಂದಿಗೆ ಅಭಿವೃದ್ದಿಗೊಂಡ ಹವ್ಯಕ ನಗರದ ಎರಡನೆಯ ಹಂತದ ಹವ್ಯಕ ಮಹಾಸಭೆಯ ನಿವೇಶನದಲ್ಲಿ ನಿರ್ಮಾಣಗೊಂಡ ವಿದ್ಯಾರ್ಥಿ ನಿಲಯ ಕಟ್ಟಡ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಶ್ರೀಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠ ಹಾಗೂ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಗಂಗಾಧರೇಂದ್ರಸರಸ್ವತೀ ಮಹಾಸ್ವಾಮಿಗಳು ಸೋಂದಾ, ಸ್ವರ್ಣವಲ್ಲೀ ಮಠ ಇವರ ದಿವ್ಯಹಸ್ತದಿಂದ ಜೂನ್ 01, 2008 ರಂದು ಉದ್ಘಾಟನೆಯಾಯಿತು. ಕಟ್ಟಡ ನಿರ್ಮಾಣದಲ್ಲಿ ದೊಡ್ಡ ಮೊತ್ತದ ದೇಣಿಗೆ ನೀಡಿದ ದಾನಿಗಳ ಅಪೇಕ್ಷೆಯಂತೆ ಗೋರೆಭಟ್ಟ ವಿದ್ಯಾರ್ಥಿನಿಲಯ ಎಂದು ಇದನ್ನು ನಾಮಕರಣ ಮಾಡಲಾಯಿತು. ಇಲ್ಲಿ ಸುಮಾರು 80 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ವರ್ಷ ಈ ಹಾಸ್ಟೆಲ್‌ನ ವಿದ್ಯಾರ್ಥಿಗಳು ದಿಶಾ ಎನ್ನುವ ಧ್ಯೇಯವಾಕ್ಯದಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಹಾಗೂ ನವರಾತ್ರಿ ಸಮಯದಲ್ಲಿ ವಿಶೇಷವಾಗಿ ಶಾರದಾ ಪೂಜೆಯನ್ನು ಹಮ್ಮಿಕೊಳ್ಳುತ್ತಾರೆ.
ಬಲಮುರಿ ವಿದ್ಯಾಗಣಪತಿ ಮಂದಿರ ಹಾಗೂ ಹವ್ಯಕ ಸಭಾ ಭವನ ಭಾರತೀ ನಗರ ಬನ್ನೂರು ಕರ್ಮಲ ಪುತ್ತೂರು ದಕ್ಷಿಣ ಕನ್ನಡ:
೧೯೯೬ರ ವಿಶ್ವಹವ್ಯಕ ಸಮ್ಮೇಳನದ ಸಫಲತೆಯ ದ್ಯೋತಕವಾಗಿ ಉಳಿದ ಮೂಲ ಹಣದಿಂದ ೨೦೦೧ರಲ್ಲಿ ಪುತ್ತೂರಿನ ವಿವೇಕಾನಂದ ನಗರದ ಸಮೀಪ ಬನ್ನೂರಿನಲ್ಲಿ ೩೭ಸೆಂಟ್ ಜಾಗ ಖರೀದಿಸಲಾಯಿತು. ಈ ಜಾಗದಲ್ಲಿ ಪ್ರತಿಷ್ಠಾಪಿತಗೊಂಡಿರುವ ಬಲಮುರಿ ವಿದ್ಯಾಗಣಪತಿಯ ದೇಗುಲವು ಭಕ್ತರ ಪಾಲಿನ ಇಷ್ಟಾರ್ಥ ಸಿದ್ಧಿಯ ಶಕ್ತಿಕೇಂದ್ರವಾಗಿದೆ. ಸ್ಥಳೀಯ ನಿರ್ದೇಶಕರು ಹಾಗೂ ದಾನಿಗಳ ಪ್ರಯತ್ನದಿಂದಾಗಿ 2005ರಲ್ಲಿ ಸ್ವಂತ ಕಟ್ಟಡದಲ್ಲಿ 40 ವಿದ್ಯಾರ್ಥಿಗಳಿಗೆ ಅನುಕೂಲವಾಗುಂತೆ ವ್ಯವಸ್ಥಿತ ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸಲಾಯಿತು. 2022ರಲ್ಲಿ ವಿದ್ಯಾರ್ಥಿ ನಿಲಯದ ಬದಲಾಗಿ ಸಭೆ ಸಮಾರಂಭಗಳನ್ನು ನಡೆಸಲು ಅನುಕೂಲವಾಗುವಂತೆ ವಿದ್ಯಾಗಣಪತಿ ಮಂದಿರದ ಪಕ್ಕದಲ್ಲಿ ವ್ಯವಸ್ಥಿತವಾದ ಹವ್ಯಕ ಸಭಾಭವನವನ್ನು ನಿರ್ಮಿಸಲಾಯಿತು. ಸುಮಾರು 400 ಜನ ಕುಳಿತು ಕೊಳ್ಳ ಬಹುದಾದ ವಿಶಾಲವಾದ ಸಭಾಭವನದಲ್ಲಿ ಮದುವೆ, ಉಪನಯನಗಳಾದಿ ಶುಭ ಸಮಾರಂಭಗಳ ಜೊತೆ ಅನೇಕ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.