ಹವ್ಯಕರ ಇತಿಹಾಸ ಪ್ರಾಚೀನವಾದುದು. ಈಗ ದೊರೆತಿರುವ ಆಧಾರಗಳಿಂದ ಕ್ರಿ. ಶ. ಐದನೇ ಶತಮಾನಕ್ಕೂ ಹಿಂದಿನಿಂದಲೇ ಕರ್ನಾಟಕದಲ್ಲಿ ನೆಲೆಯೂರಿದ ಇವರು ಆರ್ಯರೆಂದು ಕರೆಸಿಕೊಳ್ಳುವ ಬ್ರಾಹ್ಮಣ ಪಂಥದವರಾಗಿದ್ದರು. ಉತ್ತರ ಪ್ರದೇಶದ ಅಹಿಚ್ಛತ್ರದಿಂದ ಬಂದವರು ಎನ್ನುವ ಐತಿಹ್ಯವಿದೆ. ಕದಂಬ ರಾಜ್ಯ ಸ್ಥಾಪಕನಾದ ಮಯೂರವರ್ಮನು ಯಜ್ಞ-ಯಾಗಾದಿಗಳನ್ನು ಮಾಡುವುದಕ್ಕೋಸ್ಕರ ತನ್ನ ವೈಜಯಂತಿಪುರ (ಬನವಾಸಿ)ಕ್ಕೆ ಕರೆತಂದನೆನ್ನುವ ಉಲ್ಲೇಖಗಳು ದೊರೆಯುತ್ತವೆ. ಹವ್ಯ-ಕವ್ಯಗಳನ್ನು ನಡೆಸುವುದು ಇವರ ಮೂಲ ವೃತ್ತಿಯಾಗಿದ್ದರಿಂದ ಇವರಿಗೆ ಹವ್ಯಕರೆಂದು ಹೆಸರಾಯಿತು.
ಪುರೋಹಿತ ವೃತ್ತಿಯ ಜೊತೆಜೊತೆಗೆ ಅಡಕೆ ಕೃಷಿಯನ್ನೂ ಅವಲಂಬಿಸಿದ ಇವರು ಆರ್ಥಿಕವಾಗಿ ಸದೃಢ ಸ್ಥಿತಿಯನ್ನು ಹೊಂದಿರುವುದು ಕಂಡುಬರುತ್ತದೆ. ತಮ್ಮ ಆಚಾರ-ವಿಚಾರ, ಸಂಪ್ರದಾಯ, ಸಂಸ್ಕಾರ, ಭಾಷೆಗಳಲ್ಲಿ ಒಂದು ಪ್ರತ್ಯೇಕತೆಯನ್ನು ಕಂಡುಕೊಂಡ ಅತ್ಯಂತ ಬುದ್ಧಿವಂತ ಜನಾಂಗ. ಒಂದು ಕಾಲದಲ್ಲಿ ಸಮಾಜಕ್ಕೆ ತಮ್ಮನ್ನು ಸ್ಪಷ್ಟವಾಗಿ ತೆರೆದುಕೊಳ್ಳದೆ, ತಮ್ಮ ವೃತ್ತಿಪ್ರವೃತ್ತಿಯ ನಿಷ್ಠೆಯಲ್ಲಿ ತೊಡಗಿಕೊಂಡ ಇವರು ಇಂದು ದೇಶವಿದೇಶಗಳಲ್ಲೂ ಇದ್ದಾರೆ. ಸಮಾಜಮುಖಿಯಾಗಿಯೂ ಇತ್ತೀಚಿನ ದಿನಗಳಲ್ಲಿ ತಮ್ಮನ್ನು ಒಪ್ಪಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಶೈಕ್ಷಣಿಕ ಮುಂತಾದ ವಿಷಯಗಳಲ್ಲಿ ಬಲವಾದ ಸಂಘಟನೆಯನ್ನು ಹುಟ್ಟುಹಾಕಿದಾಗ ಮಾತ್ರ ಸಂವರ್ಧನೆಗೆ ದಾರಿಯಾಗುತ್ತದೆ.
ತಮ್ಮ ಮೂಲ ಬೇರುಗಳಿಂದ ಕಳಚಿಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಬದುಕನ್ನು ಚಿಗುರಿಸಿಕೊಂಡ ಹವ್ಯಕರನ್ನುಒಂದು ಕಡೆ ಸಂಘಟಿಸುವ, ಮೂಲ ಬೇರುಗಳಿಗೆ ತಳಿಕೆಹಾಕುವ ಉದ್ದೇಶವನ್ನಿಟ್ಟುಕೊಂಡು ಹುಟ್ಟಿಕೊಂಡಿರುವುದೇ ಹವ್ಯಕ ಮಹಾಸಭೆ. ದಿನಾಂಕ 08-11-1942ರಂದು ಶ್ರೀ ನೂಜಿಬೈಲು ಶಂಕರ ಭಟ್ಟ ಇವರ ಅಧ್ಯಕ್ಷತೆಯಲ್ಲಿ 24 ಜನ ಹವ್ಯಕ ಗಣ್ಯರು ಬೆಂಗಳೂರಿನಲ್ಲಿ ಸೇರಿ ಶ್ರೀ ಹವ್ಯಕ ಬ್ರಾಹ್ಮಣ ಮಹಾಸಭಾವನ್ನು ಸ್ಥಾಪಿಸಿದರು. ದೇಶದ ಸ್ವಾತಂತ್ರಕ್ಕೆ ಮೊದಲೇ ಹುಟ್ಟಿದ ಸಂಸ್ಥೆ ಎನ್ನುವ ಹೆಮ್ಮೆ ಇದಕ್ಕೆ. ದಿನಾಂಕ 29-03-1943ರಂದು ಮೈಸೂರು ಸೊಸೈಟಿ ಕಾನೂನಿನನ್ವಯ ನಂ.395ರ ಪ್ರಕಾರ ರಿಜಿಸ್ಟರ್ ಸಂಸ್ಥೆಯಾಯಿತು. ಹವ್ಯಕ ಒಗ್ಗಟ್ಟು, ಅರ್ಹ ವಿದ್ಯಾರ್ಥಿಗೆ ಧನಸಹಾಯ, ವಿದ್ಯಾರ್ಥಿನಿಲಯ ಸ್ಥಾಪನೆ, ಸಮಸ್ತ ಹವ್ಯಕರ ಹಿತ ಸಾಧನೆ ಮುಂತಾದ ಧ್ಯೇಯಗಳನ್ನಿಟ್ಟುಕೊಂಡು ರೂಪಿತವಾದ್ದು ಹವ್ಯಕ ಬ್ರಾಹ್ಮಣ ಮಹಾಸಭಾ.
ಪ್ರಪ್ರಥಮವಾಗಿ ಶ್ರೀ ಮೇಣ ರಾಮಕೃಷ್ಣ ಭಟ್, ಕಾಸರಗೋಡು ಸ್ಥಾಪಕ ಅಧ್ಯಕ್ಷರಾಗಿ ಹಾಗೂ ಶ್ರೀ ಮಕ್ಕಿರಾಮಯ್ಯನವರು ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಇವರಿಗೆ ಬೆನ್ನೆಲುಬಾಗಿ ನಿಂತು ಮಹಾಸಭೆಯ ಅಭಿವೃದ್ಧಿ ಪಥದಲ್ಲಿ ನಿಜ ಅರ್ಥದ ಹೆಜ್ಜೆ ಇಟ್ಟವರು ಶ್ರೀ ನೂಜಿಬೈಲು ಶಂಕರ ಭಟ್ಟ, ಡಾ. ಕೆ. ಎಸ್. ಗಣಪಯ್ಯ, ಡಾ. ದೊಡ್ಡೇರಿ ವೆಂಕಟಗಿರಿ ರಾವ್, ಶ್ರೀ ಎಚ್. ಅನಂತ ಶಾಸ್ತ್ರಿ, ಶ್ರೀ ಪಾಂಡೇಶ್ವರ ಸುಬ್ಬರಾವ್, ಶ್ರೀಮತಿ ಎಸ್. ಜಿ. ಕಶ್ಯಪಿ, ಡಾ. ಆರ್. ಎಂ. ಹೆಗಡೆ ಮತ್ತು ಶ್ರೀ ಯು. ನಾರಾಯಣ ಜೋಷಿ ಮುಂತಾದವರು.
ಬೆಂಗಳೂರಿನ ಅರಳೆಪೇಟೆ ಪೋಲೆಪಳ್ಳಿ ಸುಬ್ಬಯ್ಯ ಶೆಟ್ಟರ ಛತ್ರದಲ್ಲಿ ಪ್ರಪ್ರಥಮ ಸಭೆಯನ್ನು ಕರೆಯಲಾಯಿತು. ಅದೇ ತಿಂಗಳಿನಲ್ಲಿ ನೊಂದಣಿ ಮಾಡಿಸಿ ಇಂಡಿಯನ್ ಬ್ಯಾಂಕಿನಲ್ಲಿ ಹವ್ಯಕ ಮಹಾಸಭಾ ಹೆಸರಿನಲ್ಲಿ ಅಕೌಂಟ್ ತೆರೆಯಲಾಯಿತು. ಆಮೇಲೆ ಪ್ರತೀ ತಿಂಗಳು ಕೊನೆಯ ಭಾನುವಾರ ಸಭೆಯನ್ನು ನಡೆಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಮಾಸಿಕ ಚಂದಾ ಹಣ 2 ಆಣೆಯಾಗಿತ್ತು. ಸುಮಾರು ಒಂದು ವರ್ಷದ ನಂತರ ವಾರ್ಷಿಕಾಧಿವೇಶನವನ್ನು ಚಿಕ್ಕಮಗಳೂರಿನ ಜೆ. ಆರ್. ಯಾಜಿಯವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ನಂತರ ಎರಡನೇ ವಾರ್ಷಿಕಾಧಿವೇಶನ ಸಾಗರದ ಸುಪ್ರಸಿದ್ಧ ವಕೀಲರಾದ ಶ್ರೀ ಟಿ. ಎಸ್. ವೆಂಕಪ್ಪನವರ ಅಧ್ಯಕ್ಷತೆಯಲ್ಲಿ ನಡೆದು ಅದಕ್ಕೊಂದು ಪ್ರಾದೇಶಿಕ ಮಹತ್ವ ದೊರೆಯಿತು. ಆ ಸಮಯದಲ್ಲಿ ಶ್ರೀ ಮೇಣ ರಾಮಕೃಷ್ಣ ಭಟ್ಟರು ಅಧ್ಯಕ್ಷರಾಗಿ ಶ್ರೀ ಪಾಂಡೇಶ್ವರ ಸುಬ್ಬರಾವ್ ಗೌರವ ಕಾರ್ಯದರ್ಶಿಯಾಗಿ, ಶ್ರೀ ಮಕ್ಕಿರಾಮಯ್ಯನವರು ಉಪಾಧ್ಯಕ್ಷರಾಗಿ ಆಡಳಿತ ನಿರ್ವಹಿಸುತ್ತಿದ್ದರು.
15-11-1942ರಲ್ಲಿ ಡಾ. ಕೆ.ಎಸ್. ಗಣಪಯ್ಯನವರ ಮನೆಯಲ್ಲಿ ಕಾರ್ಯಕಾರಿ ಸಮಿತಿಯ ಸಭೆ ಸೇರಿ ಮಹಾಸಭೆಯ ಧ್ಯೇಯೋದ್ದೇಶಗಳು, ನಿಯಮಾವಳಿಗಳು ಮುಂತಾದ ಯೋಜನೆಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಒಂದು ನಿರ್ಣಯವನ್ನು ಕಂಡುಕೊಂಡರು. ನಿಜವಾಗಲೂ ದೂರದರ್ಶಿತ್ವದ ವಿಶಾಲ ಭಾವನೆಯ ನಿರ್ಣಯಗಳಾಗಿ ಸರ್ವತೋಮುಖ ಅಭಿವೃದ್ಧಿಯ ಕಡೆ ತೆರೆದುಕೊಳ್ಳಲು ಇದು ಸಹಾಯಕವಾಗಿತ್ತು. ಬಹಳ ಮುಖ್ಯವಾಗಿ ಮಹಾಸಭೆಯ ಆಡಳಿತ ಕೇಂದ್ರವು ಬೆಂಗಳೂರು ನಗರವಾಗಿದ್ದು, ಅದರ ವ್ಯಾಪ್ತಿಯು ಹವ್ಯಕ ಜನಾಂಗವಿರುವ ಎಲ್ಲಾ ಕಡೆಗೂ ಅನ್ವಯಿಸುತ್ತದೆ ಎನ್ನುವ ಮಹತ್ವದ ನಿರ್ಣಯ ಅದಾಗಿತ್ತು. ಇಷ್ಟು ವರ್ಷ ಸಾಮಾನ್ಯವಾಗಿ ಬೆಂಗಳೂರಿನಲ್ಲಿರುವವರು ಮಾತ್ರ ಸದಸ್ಯರಾಗುತ್ತಿದ್ದರು. ಅದು ಅಷ್ಟಕ್ಕೆ ಮಾತ್ರ ಸೀಮಿತವಾಗಿತ್ತು. ಪದಾಧಿಕಾರಿಗಳು, ಸದಸ್ಯರು, ಉತ್ತರಕನ್ನಡ, ದಕ್ಷಿಣಕನ್ನಡ, ಶಿವಮೊಗ್ಗ, ಮಂತಾದ ಕಡೆಗಳಲ್ಲಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡು ಅದರ ಸಂಖ್ಯೆ ಜಾಸ್ತಿಯಾಗಲು ನಿಸ್ವಾರ್ಥವಾಗಿ ದುಡಿದರು. 1956ರಲ್ಲಿ ಕರ್ನಾಟಕದ ಏಕೀಕರಣವಾದ ನಂತರ ಬೆಂಗಳೂರಿನಲ್ಲಿ ಹವ್ಯಕರ ಸಂಖ್ಯೆ ಬೆಳೆಯತೊಡತು. ಇದರಿಂದ ವಾರ್ಷಿಕ ಸದಸ್ಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಯಿತು. ಆರ್ಥಿಕ ಅನುಕೂಲತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಾರಣವಾಯಿತು. 1962ರಲ್ಲಿ ಶ್ರೀ ಎ. ಭೀಮ ಭಟ್ಟರು ಅಧ್ಯಕ್ಷರಾಗಿ, ಶ್ರೀ ಕೆ. ಐ. ಭಟ್ಟರು ಉಪಾಧ್ಯಕ್ಷರಾಗಿ, ಶ್ರೀ ಕೆ. ವಿ. ಹೆಗಡೆ ಕಾನುಗೋಡು ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.
ಇಷ್ಟಾದರೂ ಮಹಾಸಭೆಗೆ ತನ್ನದೇ ಆದ ಕಾರ್ಯಾಲಯವಿರಲಿಲ್ಲ. ಕಾರ್ಯದರ್ಶಿಯವರ ಮನೆಯೇ ಕಾರ್ಯಾಲಯವಾಗುತ್ತಿತ್ತು. ಮಹಾಸಭೆಯ ಲೆಕ್ಕಪತ್ರದ ಆಡಿಟ್ ಅನ್ನು ಮೊದಲು ಕೆಲವು ವರ್ಷ ಶ್ರೀ ಕೆ. ಆರ್. ರಾಮಕೃಷ್ಣಯ್ಯ, ಶ್ರೀ ಎಸ್. ಜಿ. ಕೇಶವಮೂರ್ತಿಯವರು ನೋಡಿಕೊಳ್ಳುತ್ತಿದ್ದರು. ಆನಂತರ 1964ರಿಂದ ಶ್ರೀ ಬಿ. ಕೆ. ರಾಮಧ್ಯಾನಿ ಮತ್ತು ಕಂಪನಿಯರು ಏನೂ ಪ್ರತಿಫಲಾಪೇಕ್ಷೆಯಿಲ್ಲದೆ ಆಡಿಟ್ ಮಾಡಿಕೊಡುತ್ತಿದ್ದರು.
ಪ್ರಗತಿಯ ಹೆಜ್ಜೆಗಳು: ಆರ್ಥಿಕ, ಸಾಮಾಜಿಕ ಸಮಸ್ಯೆಗಳು ಸಾಕಷ್ಟಿದ್ದರೂ, ಮಹಾಸಭೆ ತನ್ನ ಬದ್ಧತೆಯನ್ನು ಶಿತಥಿಲಗೊಳಿಸಲು ಬಿಡಲಿಲ್ಲ. ಸಮಸ್ಯೆಗಳು ಒಂದರ್ಥದಲ್ಲಿ ಒಂದು ಸಂಸ್ಥೆಯ ಜೀವಂತಿಕೆಯ ಲಕ್ಷಣ ಏನೂ ಸಮಸ್ಯೆಗಳಿಲ್ಲ ಎಂದರೆ ಅದು ಸತ್ತುಹೋಗಿದೆ ಎಂದೆ ಅರ್ಥ. ಮಹಾಸಭೆ ತನ್ನ ಜೀವಂತಿಕೆಯನ್ನು ಸದಾ ಕಾಪಾಡಿಕೊಂಡು ಪ್ರಗತಿಯ ಒಂದೊಂದೆ ಹೆಜ್ಜೆಗಳನ್ನಿಡಲು ಪ್ರಾರಂಭಿಸಿತು.
ನಿವೇಶನ: ಮಹಾಸಭೆಗೊಂದು ಸ್ವಂತ ಕಟ್ಟಡ ಕಟ್ಟಲು ಯೋಗ್ಯವಾದ ಖಾಲಿ ನಿವೇಶನವನ್ನು ಸದಾಶಿವನಗರದಲ್ಲಿ 1969ರಲ್ಲಿ 29,500/- ರೂಪಾಯಿಗಳಿಗೆ ಖರೀದಿಸಲಾಯಿತು. ಕಟ್ಟಡ ಕಟ್ಟಲು ದೇಣಿಗೆ ಸಂಗ್ರಹ ಮಾಡಬೇಕೆಂದು ತೀರ್ಮಾನಿಸಿ, 1971ರಲ್ಲಿ ಕಟ್ಟಡದ ನೀಲಿನಕ್ಷೆಯನ್ನು ತಯಾರು ಮಾಡಲಾಯಿತು. ಆದರೆ ಈ ಖಾಲಿ ನಿವೇಶನ ಮಹಾಸಭೆಯ ಯೋಚನೆ-ಯೋಜನೆಗಳಿಗೆ ಹೋಲಿಕೆ ಮಾಡಿದರೆ ತೀರಾ ಸಣ್ಣನಿವೇಶನವಾಯಿತು ಎನ್ನುವುದು ಪದಾಧಿಕಾರಿಗಳ ಅರಿವಿಗೆ ಬಂತು. ಈ ಸಂದರ್ಭದಲ್ಲಿ ಮಲ್ಲೇಶ್ವರದ ನಿವೇಶನವೊಂದು (ಈಗ ಹವ್ಯಕ ಮಹಾಸಭೆ ಇರುವ ಸ್ಥಳ) ಖರೀದಿಗೆ ಅಥವಾ ಅದಲು-ಬದಲಿಗೆ ದೊರಕುವುದೆಂದು ತಿಳಿದು ಬಂತು. ಖಾಲಿ ನಿವೇಶನವನ್ನು ಕೊಟ್ಟು ಮತ್ತೆ ಮೇಲಿನಿಂದ 5000/- ರೂಪಾಯಿ ಕೊಟ್ಟರೆ ಈಗಿನ 130 X 761 = 98930 ಅಡಿಗಳ ಅಳತೆ ಇರುವ ದೊಡ್ಡ ನಿವೇಶನ ಸಿಗುವುದೆಂದು ತಿಳಿದಾಗ ಅದನ್ನು ಕೊಳ್ಳಲಾಯಿತು. ಸಾಲವನ್ನು ತೆಗೆದುಕೊಂಡು ಕಟ್ಟಡದ ಮೊದಲ ಎರಡು ಹಂತಗಳನ್ನು ಪೂರೈಸಲಾಯಿತು. ಒಟ್ಟು 14 ಕೋಣೆಗಳು ತಯಾರಾಗಿ 28 ವಿದ್ಯಾರ್ಥಿಗಳಿಗೆ ಉಳಿದುಕೊಳ್ಳುವ ಅವಕಾಶ ಒದಗಿಸಲಾಯಿತು. ಬಂದ ಅತಿಥಿಗಳಿಗೆ ದಿನವೊಂದಕ್ಕೆ 6 ರೂಪಾಯಿ ಬಾಡಿಗೆ ರೂಪದಲ್ಲಿ ಉಳಿದುಕೊಳ್ಳುವ ಅವಕಾಶವನ್ನೂ ಕಲ್ಪಿಸಲಾಯಿತು. ಕೊಂಡ ನಿವೇಶನದಲ್ಲಿ 40 X 76 ಅಡಿಗಳ ಅಳತೆಯ ಸ್ಥಳದಲ್ಲಿ ಮಾತ್ರ ಕಟ್ಟಡವಿದ್ದು, ಉಳಿದ 90 X 76 ಅಡಿ ಅಳತೆಯ ಸ್ಥಳ ಖಾಲಿ ಇತ್ತು. ಕಟ್ಟಡದಲ್ಲಿ ಅಲ್ಪ ಮಾರ್ಪಾಟು ಮಾಡಿ ಪಕ್ಕದಲ್ಲಿರುವ ಖಾಲಿ ಸ್ಥಳದಲ್ಲಿ ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ಕಲ್ಯಾಣ ಮಂಟಪವನ್ನು ಕಟ್ಟಲಾಯಿತು. ಇದರಿಂದ ಆದಾಯ ಬರಲು ಪ್ರಾರಂಭವಾಗಿ ಮಹಾಸಭೆ ಪ್ರಗತಿಯತ್ತ ತನ್ನ ಬಾಗಿಲುಗಳನ್ನು ಒಂದೊಂದಾಗಿ ತೆರೆಯಲು ಸಾಧ್ಯವಾಯಿತು.
1971ರಲ್ಲಿ ಅಧ್ಯಕ್ಷರಾದ ಡಾ. ಎನ್.ಕೆ. ಗಣಪಯ್ಯನವರು ಸಾಲದ ರೂಪದಲ್ಲಿ ಹಾಗೂ ದೇಣಿಗೆ ರೂಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಮಹಾಸಭೆಗೆ ನೀಡಿದ್ದಲ್ಲದೆ ಅವರ ದೂರದರ್ಶಿತ್ವ ಪ್ರೋತ್ಸಾಹ, ಔದಾರ್ಯ ಹಾಗೂ ದಕ್ಷ ಮಾರ್ಗದರ್ಶನದಲ್ಲಿ 1974ರಲ್ಲಿ ಹವ್ಯಕ ಭವನ ಮೇಲೆದ್ದು ನಿಂತಿತು. ಇದು ನಮ್ಮ ಮನೆ ಎನ್ನುವ ಅಭಿಮಾನವು ಸಮಾಜಬಾಂಧವರಲ್ಲಿ ಉಂಟಾಗಿ ಎಲ್ಲ ರೀತಿಯಿಂದಲು ಅಭಿವೃದ್ಧಿಹೊಂದಲು ಸಹಕಾರಿಯಾಯಿತು. 1979ರಲ್ಲಿ ಶ್ರೀ ಬ್ರಾಹ್ಮಣ ಮಹಾಸಭೆ ಹೆಸರಿಗೆ ಬದಲಾಗಿ ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ.) ಬೆಂಗಳೂರು ಎಂಬ ಹೆಸರನ್ನು ಪಡೆದು, ಸಮಸ್ತ ಹವ್ಯಕ ಸಮಾಜದ ಪ್ರತಿಷ್ಠಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಸ್ಥಾಪನೆಯಾದ ಸುಮಾರು 32 ವರ್ಷದ ನಂತರ ಮಹಾಸಭೆ ತನ್ನ ಸ್ವಂತ ಕಟ್ಟಡವನ್ನು ಹೊಂದಿದುದು ಹವ್ಯಕರೆಲ್ಲರ ಹೆಮ್ಮೆಯಾಗಿದೆ.
ದಿನಾಂಕ 25-05-1974 ರಂದು ಮಹಾಸಭೆ ತನ್ನ ವಾರ್ಷಿಕಾಧಿವೇಶವನ್ನು ತನ್ನ ಸ್ವಂತ ಕಟ್ಟಡದಲ್ಲಿ ವಿಜೃಂಭಣೆಯಿಂದ ಆಚರಿಸಿತು. ಹವ್ಯಕ ಮಹಾಸಭೆಯಾಗಿ ಪುನರ್ನಾಮಕರಣದ ಕಾರಣದಿಂದ, ಹವ್ಯಕರು ನೆಲೆಸಿರುವ ಎಲ್ಲಾ ಪ್ರದೇಶಗಳನ್ನು ಪರಿಗಣಿಸಿ ಪ್ರಾದೇಶಿಕ ಪ್ರಾಮುಖ್ಯತೆಯನ್ನು ನೀಡಿ, ಕೇಂದ್ರ ಸಂಸ್ಥೆಗೆ ಆಡಳಿತ ಮಂಡಳಿಯನ್ನು ರಚಿಸಲಾಯಿತು.
ಆ ನಂತರದ ದಿನಗಳಲ್ಲಿ ಬೆಳವಣಿಗೆ ಹೊಂದುತ್ತಾಬಂದ ಶ್ರೀ ಅಖಿಲ ಹವ್ಯಕ ಮಹಾಸಭೆ ತನ್ನ ಯೋಚನೆ-ಯೋಜನೆಗಳನ್ನು ವಿಸ್ತರಿಸುವ ಹಿನ್ನಲೆಯಲ್ಲಿ ಸುಮಾರು ನಲವತ್ತು ವರ್ಷಗಳ ನಂತರ ಶಿಥಿಲವಾದ ಮೂಲ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಿ, ಇದ್ದ ಸ್ಥಳದಲ್ಲಿಯೇ ಆಧುನಿಕ ವಿನ್ಯಾಸಗಳನ್ನೊಳಗೊಂಡ ಬಹು ಮಹಡಿಗಳ ವಿದ್ಯಾರ್ಥಿನಿಲಯ, ಸಮುಚ್ಚಯವನ್ನು ನಿರ್ಮಿಸಲು ತೀರ್ಮಾನಿಸಿ, ಈ ಸಂಬಂಧವಾಗಿ ದಿನಾಂಕ 20-02-2014ರಂದು ಶಾಸ್ತ್ರೋಕ್ತವಾಗಿ ಭೂಮಿಪೂಜೆ ನೆರವೇರಿಸಲಾಯಿತು.
ದಿನಾಂಕ 13-02-2016 ಮತ್ತು 14-02-2016ರಂದು ನೂತನ ವಿದ್ಯಾರ್ಥಿನಿಲಯ ಸಮುಚ್ಚಯದ ಶ್ರೇಯೋಭಿವೃದ್ಧಿಗಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆದು. ದಿನಾಂಕ 21-02-2016ರಂದು ಶ್ರೀ ಎಸ್. ಜಿ. ಹೆಗಡೆ, ಕರ್ಕಿ ಇವರ ಅಧ್ಯಕ್ಷತೆಯಲ್ಲಿ ಮಲ್ಲೇಶ್ವರಂ ಶಾಸಕರಾದ ಡಾ. ಸಿ. ಎನ್. ಅಶ್ವಥ್ ನಾರಾಯಣ ಇವರಿಂದ ನೂತನ ವಿದ್ಯಾರ್ಥಿನಿಲಯ ಸಮುಚ್ಚಯ ಲೋಕಾರ್ಪಣೆಗೊಂಡಿತು. ಈ ಸಂದರ್ಭದಲ್ಲಿ ಶಾಸಕರು, ಸಂಸದರು, ಮಂತ್ರಿಮಹೋದಯರು, ಉಪಸ್ಥಿತರಿದ್ದು ಅದಕ್ಕೊಂದು ಭವ್ಯಕಳೆ ಉಂಟಾಗಿತ್ತು. ಹವ್ಯಕ ಬಾಂಧವರ ಹಾಗೂ ಸಮಾಜದ ಗಣ್ಯರ, ಜನಪ್ರತಿನಿಧಿಗಳ ವಿಶಾಲ ಮನಸ್ಸಿನ ಸ್ಪಂದನೆಯ ಮೂಲಕ ಆರ್ಥಿಕ ಸಂಪನ್ಮೂಲವನ್ನು ಕ್ರೋಢಿಕರಿಸಿಕೊಂಡು, ಒಟ್ಟಾಗಿ ದುಡಿದುದರ ಪೂರ್ಣಫಲವೇ ಈಗಿನ ಸುಂದರ ವ್ಯವಸ್ಥಿತ ಸಮುಚ್ಚಯ. ಇದು ಹವ್ಯಕ ಸಮಾಜಕ್ಕೊಂದು ಬಹುದೊಡ್ಡ ಕೊಡುಗೆಯಾಗಿದೆ.
ಬೃಹತ್ ಯೋಜನೆಯ ಹಿನ್ನಲೆಯಲ್ಲಿ ವಿಶಾಲವಾಗಿ ನಿಂತ ಕಟ್ಟಡದ ನೆಲಮಾಳಿಗೆಯಲ್ಲಿ ಸುವ್ಯವಸ್ಥಿತ ಅಡುಗೆ ಮನೆ, ಸುಮಾರು 200 ಜನರಿಗೆ ಏಕಕಾಲಕ್ಕೆ ಅವಕಾಶವಿರುವ ಊಟದ ಹಾಲ್, ನೆಲಮಹಡಿಯಲ್ಲಿ ಸುಮಾರು 500 ಜನ ಕುಳಿತುಕೊಳ್ಳಬಹುದಾದ ದೊಡ್ಡ ಸಭಾಂಗಣ, ಬಾಲ್ಕನಿ ಮತ್ತು ವಿಶಾಲವಾದ ವೇದಿಕೆ, ಅಕ್ಕಪಕ್ಕದಲ್ಲಿ ವ್ಯವಸ್ಥಿತ ಕೊಠಡಿ ಇರುವ ಇದು ಎಲ್ಲಾ ರೀತಿಯ ಸಮಾರಂಭಗಳಿಗೂ ಅನುಕೂಲಕರವಾಗಿದೆ. ಎರಡನೇ ಮಹಡಿಯಲ್ಲಿ ಕಾರ್ಯಾಲಯ ಹಾಗೂ ಎರಡು ಚಿಕ್ಕ ಸಭಾಂಗಣಗಳು ಹಾಗೂ ಮೂರನೆಯ ಮಹಡಿಯಲ್ಲಿ ವಿದ್ಯಾರ್ಥಿನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆಯಿಂದ ಕೂಡಿರುವ ಸಭಾಂಗಣವು “ಹವ್ಯಕ ಭವನ” ಎನ್ನುವ ಹೆಸರಿನಲ್ಲಿ ಶುಭ ಕಾರ್ಯ ಹಾಗೂ ಸಭೆ ಸಮಾರಂಭಗಳನ್ನು ಆಯೋಜಿಸಲು ಸಾರ್ವಜನಿಕರಿಗೆ ಮುಕ್ತವಾಗಿದೆ.
ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು
ಅ. ಸಂ. | ಅಧ್ಯಕ್ಷರು | ಅವಧಿ |
---|---|---|
1 | ಪ್ರೋ. ಮೇಣ ರಾಮಕೃಷ್ಣ ಭಟ್ಟ, ಕಾಸರಗೋಡು | 1943-1952 |
2 | ಸಿ. ಕೆ. ತಿರುಮಲೇಶ, ಬಂಟ್ವಾಳ, ದಕ್ಷಿಣ ಕನ್ನಡ | 1952-1954 |
3 | ರಾಧಾ ರಾಮಚಂದ್ರ ಭಟ್ಟ | 1954-1955 |
4 | ಸಿ. ವಿ. ನಾರಾಯಣ ರಾವ್, ಮಡಿಕೇರಿ, ಕೊಡಗು | 1955-1960 |
5 | ಸರಸ್ವತಿ ಎಸ್. ಕಶ್ಯಪಿ, ಶಿರಸಿ, ಉತ್ತರ ಕನ್ನಡ | 1960-1962 |
6 | ಎ. ಭೀಮ ಭಟ್ಟ | 1962-1971 |
7 | ಎನ್. ಕೆ. ಗಣಪಯ್ಯ, ಹಾರ್ಲೆ, ಸಕಲೇಶಪುರ, ಹಾಸನ | 1971-1987 |
8 | ಎಸ್. ಪಿ. ಭಟ್ಟ, ಹಳಕಾರ, ಕುಮಟಾ, ಉತ್ತರ ಕನ್ನಡ | 1987-1993 |
9 | ಕೆ. ಐ. ಭಟ್ಟ, ಕರ್ಕಿ, ಹೊನ್ನಾವರ, ಉತ್ತರ ಕನ್ನಡ | 1993-1994 |
10 | ಎನ್. ಭೀಮ ಭಟ್ಟ | 1994-1995 |
11 | ಕೆ. ಗೋಪಾಲಕೃಷ್ಣ ಭಟ್ಟ, ಸಾಮೆತಡ್ಕ, ದಕ್ಷಿಣ ಕನ್ನಡ | 1995-1998 |
12 | ಎಸ್. ಆರ್. ಭಾಗ್ವತ್, ಕರ್ಕಿ, ಹೊನ್ನಾವರ, ಉತ್ತರ ಕನ್ನಡ | 1998-1999 |
13 | ಶಾಲಿನಿ ಶ್ರೀನಿವಾಸ್ | 1999-2003 |
14 | ಎಮ್. ರಾಮ ಭಟ್ಟ | 2003-2005 |
15 | ಕಜೆ ಈಶ್ವರ ಭಟ್ಟ | 2005-2006 |
16 | ಎಮ್. ಎನ್. ಭಟ್ಟ, ಮದ್ಗುಣಿ | 2006-2009 |
17 | ಕೆ. ಆರ್. ಶ್ರೀಧರ ಭಟ್ಟ, ಕಲಸಿ, ಸಾಗರ, ಶಿವಮೊಗ್ಗ | 2009-2011 |
18 | ಜಿ. ವಿ. ಹೆಗಡೆ, ಕಾನುಗೋಡು, ಶಿರಸಿ, ಉತ್ತರ ಕನ್ನಡ | 2011-2012 |
19 | ಎಸ್. ಜಿ. ಹೆಗಡೆ | 2012-2015 |
20 | ಡಾ. ಗಿರಿಧರ ಕಜೆ | 2015- |
ಅ. ನಂ. | ಪ್ರಧಾನ ಕಾರ್ಯದರ್ಶಿಗಳು | ಅವಧಿ |
---|---|---|
1 | ಮಕ್ಕಿ ರಾಮಯ್ಯ | 1943-1952 |
2 | ಪಾಂಡೇಶ್ವರ ಸುಬ್ಬ ರಾವ್ | 1952-1954 |
3 | ಹೆಚ್. ಅನಂತ ಶಾಸ್ತ್ | 1954-1961 |
4 | ಹೆಚ್. ಅನಂತ ಶಾಸ್ತ್ರಿ | 1954-1961 |
5 | ಕೆ. ವಿ. ಹೆಗಡೆ, ಕಾನುಗೋಡು, ಶಿರಸಿ, ಉತ್ತರ ಕನ್ನಡ | 1962-1975 |
6 | ಎಮ್. ಎಸ್. ಭಟ್ಟ, ಚಿತ್ರಗಿ | 1975-1976 |
7 | ಆರ್. ವಿ. ಜಯಪ್ರಕಾಶ | 1976-1977 |
8 | ಎಮ್. ಎನ್. ಹೆಗಡೆ, ಹಾರೂಗಾರ | 1977-1978 |
9 | ಜಿ. ಜಿ. ಹೆಗಡೆ, ಹೂವಿನಮನೆ | 1978-1979 |
10 | ಬಿ. ಜೆ. ಶ್ರೀಧರ | 1979-1982 |
11 | ವಿ. ಆರ್. ಹೆಗಡೆ, ಹೆಗಡೆಮನೆ | 1982-1984 |
12 | ಎಮ್. ಆರ್. ಮಂಜುನಾಥ | 1984-1987 |
13 | ಡಾ. ಬಿ. ವಿ. ನರಹರಿ ರಾವ್ | 1987-1989 |
14 | ಎಸ್. ಆರ್. ಭಾಗ್ವತ್ | 1989-1991 |
15 | ಡಾ. ಎಮ್. ಆರ್. ಕಲಗಲ್ | 1991-1995 |
16 | ಜಿ. ಕೆ. ಭಟ್ಟ | 1995-1998 |
17 | ಎಸ್. ಜಿ. ಭಟ್ಟ | 1998-2000 |
18 | ಎಮ್. ನಾರಾಯಣಮೂರ್ತಿ | 2000-2001 |
19 | ಚಂದ್ರಹಾಸ ಭಟ್ಟ | 2001-2002 |
20 | ಜಿ. ಜಿ. ಹೆಗಡೆ, ತಲೆಕೇರಿ | 2002-2005 |
21 | ಎಮ್. ಜಿ. ಹೆಗಡೆ, ಹಾರೂಗಾರ | 2005-2008 |
22 | ಕೆ. ಎನ್. ಮಂಜುನಾಥ ರಾವ್ | 2008-2010 |
23 | ಮುಗಲೋಡಿ ಕೃಷ್ಣಮೂರ್ತಿ | 2010-2011 |
24 | ಕೆ. ಎನ್. ಮಂಜುನಾಥ ರಾವ್ | 2011-2012 |
25 | ಡಿ. ವಿ. ಹೆಗಡೆ, ಹಾರೂಗಾರ | 2012-2013 |
26 | ಮುಗಲೋಡಿ ಕೃಷ್ಣಮೂರ್ತಿ | 2013-2015 |
27 | ವೇಣು ವಿಘ್ನೇಶ, ಸಂಪ | 2015- |